-->

ನೆತ್ತಿಯ ಸೀಳಿದಂತೆ

MadhuNews | Friday, June 20, 2025

 



ಹಗಲು ಹೊತ್ತಿನಲ್ಲಿ ಚತುಷ್ಟಯರ ಪ್ರಚಾರ ಕಾರ್ಯ ನಡೆದರೆ, ರಾತ್ರಿ ಹೊತ್ತು ಬಸವರಾಜೂನ ಸಂಚುಗಳು ನಡೆಯುತ್ತಿದ್ದವು. ಹಳ್ಳಿಯ ಕೊಳ್ಳೀ ಬೆಳಕಿನಲ್ಲಿ ಅವು ಜನಗಳ ಕಣ್ಣಿಗೆ ಬೀಳುತ್ತಿರಲಿಲ್ಲ.
ಮುಂಗಾರಿ ಬೆಳೆ ಬಂದಾಗಿತ್ತು. ಹಿಂಗಾರಿಯಿನ್ನೂ ಹೊಲಗಳಲ್ಲಿತ್ತು. ಈಗ ದೇವರೇಸಿಗೆ ಮೈತುಂಬ ಕೆಲಸ. ಓಡಾಡಿ ಆಯ ತರಬೇಕಿತ್ತು. ಸಂಜೆಯ ತನಕ ಕಣದಿಂದ ಕಣಕ್ಕೆ ಅಲೆದಾಡಿ ಗುಡಿಸಲಿಗೆ ಬಂದರೆ, ಕಂಬಳಿ ಚೆಲ್ಲಿಕೊಂಡು ಬಿದ್ದರೆ ಸಾಕಾಗಿತ್ತು. ಆದರೆ ಎಷ್ಟಂದರೂ ಚಪಲದ ಬಾಯಿ, ಕಂಠಮಟ ಕುಡಿಯಬೇಕೆನಿಸಿ ಒಣಗುತ್ತಿತ್ತು. ಒತ್ತ ಲಗಮವ್ವನಿಗೂ ಆಯ ಸಂಗ್ರಹಿಡುವ ಕೆಲಸ. ಭಟ್ಟಿಯಿಳಿಸುವುದು ಅವಳಿಂದ ಸಾಧ್ಯವಿರಲಿಲ್ಲ. ಅವಳು ಅಡಿಗೆ ಮಾಡಿಕೊಳ್ಳುವುದೇ ಅಪರೂಪವಾಗಿತ್ತು. ಹೊಲಗಳಲ್ಲಿ ರೈತರು ಕೊಡುವ ರೊಟ್ಟಿಯಿಂದಲೇ ತೃಪ್ತಳಾಗುತ್ತಿದ್ದಳು. ಇಷ್ಟು ದಿನ ಗುಡಿಸಲಲ್ಲಿ ದುರ್ಗಿಯಿರುತ್ತಿದ್ದಳು. ಲಗಮವ್ವ ಬೇಕೆನಿಸಿದರೆ ಒಂದು ರೊಟ್ಟಿ ಸಡಿಸಿಕೊಳ್ಳುತ್ತಿದ್ದಳು. ಈಗ ದುರ್ಗಿಯ ಬಳಕೆ ಕಮ್ಮಿಯಾಗಿತ್ತು.
ಇತ್ತ ದಿನ ಅಲ್ಲ. ಕಾಲವಲ್ಲ, ಧೀನ್ ಅಂದ ಹಾಗೆ ಸುಂದರಿಯ ಸಡಗರ ಕಟ್ಟುಮೀರಿತ್ತು. ಗುಡಸೀಕರ ಮತ್ತೆ ಸಿಕ್ಕ ಸಂಭ್ರಮದಲ್ಲಿ ಮೈಮರೆತು ಖಬರಗೇಡಿಯಾಗಿದ್ದಳು. ಅವಳನ್ನು ಹಿಡಿಯುವುದೇ ಕಷ್ಟವಾಗಿ ಕಣ್ಣಿ ಬಿಚ್ಚಿದ ಉಡಾಳ ದನದಂತೆ ಮೈ ಉಮೇದಿಯನ್ನು ಕೇರಿಯ ತುಂಬ ತುಳುಕಿದಳು. ನೆಲ ಗುಡಿಸುವ ಹಾಗೆ ನೆರಿಗೆ ಹೊಡೆದು ಇಪ್ಪತ್ತು ರೂಪಾಯಿಯ ಶಾಪೂರಿ ಸೀರೆ ಉಟ್ಟು ಮೆರೆದಳು. ಬಾಡಿಯ ಎದೆಯಲ್ಲೆರಡು ಚೂಪಾದ ಚೂರಿ ಇಟ್ಟುಕೊಂಡು ಗುಡಸೀಕರನ ಕಣ್ಣಿರಿದಳು. ಸೊಂಟಕ್ಕೆ ಬೆಂಕಿ ಹಚ್ಚಿದಳು. ಮೂಗಿನ ದಿಗರಿನಲ್ಲಿ ಕೆಳಗಿನ ನೆಲ ಮರೆತಳು. ಜನ ಕುಕ್ಕದಿರಲಿಲ್ಲ. ಆದರೆ ಹೇಳಿ ಕೇಳಿ ಸೂಳೆಯಾದ್ದರಿಂದ, ಅದೂ ಪರವೂರವಳಾದ್ದರಿಂದ ಅನ್ನುವಷ್ಟು ಅಂದು ಸುಮ್ಮನಾದರು. ಆದರೆ ಮೂಗಿನ ಮೂಗುತಿಯಲ್ಲೇ ನದರ ನೆಟ್ಟ ಸುಂದರಿಗೆ ಈ ಮಾತು ಕೇಳಿಸಲಿಲ್ಲ. ಚೈನಿಯ, ಪ್ರೇಮದ, ಕಾಮದ, ಸುಖದ ಉನ್ಮಾದದಲ್ಲಿ ಹುಚ್ಚು ಕುದುರೆಯಾಗಿದ್ದಳು. ಏರಿದವನ ಖರೆ, ಖೊಟ್ಟೆ, ತಿಳಿಯದೆ, ಗೊತ್ತುಗುರಿ ಗೊತ್ತಿಲ್ಲದೆ ಮೂಗಿನ ಮುಂದಿನ ದಿಕ್ಕಿಗೆ, ಎದುರು ತಗ್ಗಿರಲಿ, ದಿನ್ನೆಯಿರಲಿ, ಏಳಲಿ, ಬೀಳಲಿ, ಓಟಕ್ಕೆ ಸಿದ್ಧವಾಗುತ್ತಿದ್ದಳು. ಆದರೆ ಅವಳಿಗೂ ತಿಳಿದಿರಲಿಲ್ಲ. ತನ್ನ ನಿಜವಾದ ಸವಾರ ಯಾರೆಂದು.
ಇತ್ತ ಬಸವರಾಜು ಜಾತ್ಯಾ ಕಮ್ಮಾರನಂತೆ ಕುಲುಮೆಯಲ್ಲಿ ಅನೇಕ ಕಬ್ಬಿಣ ಹಾಕಿ ಕಾಸುತ್ತಿದ್ದ. ಚತುಷ್ಟಯರಿಂದ ತಿದಿ ಊದಿಸುತ್ತಿದ್ದ. ಇದ್ದಿಲು ಹಾಕುತ್ತಿದ್ದ. ಕಬ್ಬಿಣ ಕಾದೊಡನೆ ಗುಡಸೀಕರನಿಂದ ಹೊಡೆಸಿ ಏನೋ ಸಾಮಾನು ಮಡುತ್ತಿದ್ದ. ಆದರೆ ಮಾಡಿದ ಸಾಮಾನು ಯಾರಿಗೆ ಯಾವ ಕೆಲಸಕ್ಕೆ ಉಪಯೋಗ ಬೀಳುತ್ತದೆಂಬುದು ಮಾತ್ರ ಬೇರೆಯವರಿಗೆ ತಿಳಿಯುತ್ತಲೇ ಇರಲಿಲ್ಲ. ಅವನ ಕುಲುಮೆಯಲ್ಲಿ ಅನೇಕ ದಿನಗಳಿಂದ ಬಿದ್ದಿದ್ದ ಸಲಾಕೆಯೊಂದಿತ್ತು. ಹೊಸ ಮಿದು ಕಬ್ಬಿಣವೊಂದು ಬಂದು ಸೇರಿತ್ತು. ಅದೇನು ಸಾಮಾನು ಮಾಡುತ್ತಾನೋ ನೋಡೋಣ.

ಒಂದು ದಿನ ದೇವರೇಸಿ ಹೊಲದಿಂದ ಮೂರು ಸಂಜೆಗೇ ಬಂದ. ಬಸವರಾಜು ಮೆತ್ತಗೆ ದೇವರೇಸಿಯ ಗುಡಿಸಲಲ್ಲಿ ಕಾಲಿಟ್ಟ.  ನೋಡ ನೋಡುತ್ತಿದ್ದಂತೇ “ತಾಯೀ” ಎಂದು ಬಂದವನೇ ಕಾಲು ಹಿಡಿದ. ಅವನ ಬಗ್ಗೆ ದೇವರೇಸಿಗೇನೂ ಸಿಟ್ಟಿರಲಿಲ್ಲ. ಅಸಮಾಧಾನವೂ ಇರಲಿಲ್ಲ. ಆದರೆ ಆತ ತನ್ನ ಗುಡಿಸಲಿಗೆ ಬಂದಾನೆಂದು ಕನಸು ಮನಸಿನಲ್ಲಿಯೂ ಧೇನಿಸದವನಲ್ಲ. ತಾನಾಗಿ ಗುಡಿಸಲಿಗೆ ಬಮದನಲ್ಲ, ಬಂದವನು ಕಾಲು ಹಿಡಿದನಲ್ಲ, ದೇವರೇಸಿಗೆ ಸಂತೋಷವೇ ಆಯ್ತು. ಇಂಗರೇಜಿ ಕಲಿತವರು ತನ್ನನ್ನು ನಿರ್ಲಕ್ಷ್ಯ ಮಾಡುತ್ತಾರೆಂದು ಮನಸ್ಸಿನಲ್ಲಿ ಸ್ವಲ್ಪ ಅಸಮಾಧಾನ ಕೂಡ ಇತ್ತು. ಗುಡಸೀಕರ  ಒಮ್ಮೆಯೂ ಇವನ ಕಾಲು ಮುಟ್ಟಿರಲಿಲ್ಲ. ತಾಯೀ ಅಮದಿರಲಿಲ್ಲ. ಈತನಾದರೆ ಗುಡಸೀಕರನಿಗಿಂತ ಸ್ವಲ್ಪ ಹೆಚ್ಚು ಕಲಿತಿರಬೇಕೆಂದೇ ಅನೇಕರು ಮಾತಾಡಿಕೊಂಡಿದ್ದರು. ಈಗ ಇವನೇ ಬಂದು ಕಾಲುಹಿಡಿದು,  ಕೊಡಬೇಕಾದ ಗೌರವ ಕೊಟ್ಟಿದ್ದನಲ್ಲ, ಆ ಮಾತು ನಿಜವೆನ್ನಿಸಿತು. ಆದರೆ ಕೂಡಲೇ ಏನು ಮಾಡಬೇಕು? ಏನು ಮಾತಾಡಬೇಕೆಂದು ತೋಚಲಿಲ್ಲ. ಎದ್ದು ಹೋಗಿ ಮೂಲೆ ನೆಲುವಿಗಿದ್ದ ಬಂಡಾರ ಚೀಲತಂದು ಅವನ ಹಣೆಗಂಟಿಸಿ ಕೂತ. ಬಸವರಾಜು ಕೈಮುಗಿದೇ ಕೂತ. “ತಾಯೀ ನಮ್ಮ ಗುಡಿಸಲ ತನಕ ಪಾದಾ ಬೆಳೆಸಿ, ನಮ್ಮ ಸೇವಾ ಒಪ್ಪಿಸಿಕೋಬೇಕು” ಅಂದ. ದೇವರೇಸಿಗೆ ಇನ್ನೂ ದಿಗಿಲು. ಅವನ ಬರವಿನ ಹಾಗೆ ಅವನ ಈ ಮಾತನ್ನೂ ಆತ ನಿರೀಕ್ಷಿಸಿರಲಿಲ್ಲ. ಹೂಂ ಎನ್ನಬೇಕೆ? ಇಲ್ಲ ಅನ್ನಬೇಕೆ? ಈ ಅಡ್ಡದಿನ ಅಡ್ಡ ವೇಳೆಯಲ್ಲಿ ಸೇವೆ ಒಪ್ಪಿಸಿಕೊಳ್ಳೋದಂದರೇನು? ಗುಡಿಸಲ ತನಕ ಬರಬೇಕಂತ ಅಲ್ಲವೇ ಹೇಳಿದ್ದು? ಹೋಗಿ ಅದೇನು ಸೇವೆಯೋ ನೋಡೋಣವೆಂದುಕೊಂಡು “ಆಗಲಿ” ಅಂದ. ಬಸವರಾಜು ಎದ್ದುನಿಂತ ಕೈ ಮುಗಿದುಕೊಂಡೇ, ಅವನು ಹೋಗದೆ ಅಲ್ಲೇ ನಿಂತದ್ದನ್ನು ನೋಡಿ ಬಹುಶಃ ಈಗಲೇ ಬಾ ಅಂತಿದ್ದಾನೆಂದು ದೇವರೇಸಿಯೂ ಎದ್ದ. ಬಸವರಾಜು ಮುಂದೆ ಹೊರಟ. ದೇವರೇಸಿ ಬೆನ್ನುಹತ್ತಿದ.
ಕಂಬಳಿ ಹಾಸಿತ್ತು. ತಾಯಿ ಗದ್ದಿಗೆಗೊಂಡಳು. ಬಸವರಾಜು ಒಳ ಹೊರಗೆ ಓಡಾಡುತ್ತ, ಸಂಭ್ರಮ ಮಾಡುತ್ತ ಒಂದು ಹರಿವಾಣ ತುಂಬ ವಿಸ್ಕಿ ಸುರಿದು ತಾಯಿಗಿತ್ತ. ತಾಯಿಗೆ ಹಿಗ್ಗೋ ಹಿಗ್ಗು. ಈಗ ಹದಿನೈದಯ ದಿನಗಳಿಂದ ಮುಟ್ಟಿರಲಿಲ್ಲವಲ್ಲ, ಕುಡಿಯೋದನ್ನ ಬಿಟ್ಟು ವರ್ಷವಾದಂತಾಗಿತ್ತು. ಅಲ್ಲದೆ ಈ ತನಕ ಕುಡಿದದ್ದು ಕಂಟ್ರಿ ಸೆರೆ; ಅದೂ ಲಗಮವ್ವ ಮಡಿದ್ದು. ಇದಾದರೆ ಥಳ ಥಳ ಹೊಳೆಯುವ ಬಣ್ಣದ ಬಾಟ್ಲಿಯಲ್ಲಿಟ್ಟದ್ದು, ತನ್ನದುರಿಗೇ ಅದನ್ನು ಒಡೆದದ್ದು. ಮುಂದಿಡುವುದೇ ತಡ ತಾಯಿ ಒಂದೇ ಗುಟುಕಿಗೆ ತಳಕ್ಕೊಂದು ಹನಿ ಕೂಡ ಬಿಡದೆ ಮುಗಿಸಿದಳು. ಕರುಳಿನಲ್ಲಿ ಭಗ್ಗನೇ ಬೆಂಕಿ ಹೊತ್ತಿದಂತಾಗಿ ಕಿವಿ, ಮೂಗು ಬಾಯಿಗಳಲ್ಲಿ ಬಿಸಿ ಗಾಳಿ ಸೂಸಿತು. ಆಮೇಲೆ ಒಳಗೆ ಹೋಗಿ ಹರಿವಾಣದ ತುಂಬ ಖಂಡದ ಪಲ್ಯ, ಏಳೆಂಟು ರೊಟ್ಟಿ ತಂದು ಮುಂದಿಟ್ಟ, ತಾಯಿಯ ಕಣ್ಣರಳಿ, ಮೂಗರಳಿ, ಆ ಈ ನೋಡದೆ ಪಟಪಟ ತಿನ್ನತೊಡಗಿದಳು.

ನೀರು ಕೂಡ ಬೆರಸದೆ ಇಡೀ ಬಾಟ್ಲಿ ವಿಸ್ಕಿಯನ್ನು ಒಂದೇ ಗುಟುಕಿಗೆ ಸೇವಿಸಿದಾಗ ಬಸವರಾಜು ಕಣ್ಣಗಲಿಸಿ ಆಶ್ಚರ್ಯ ಸೂಚಿಸಿದ್ದರೆ ಚಿಮಣಾ ಕಣ್ಣರಳಿಸಿ ನಾಲಿಗೆ ಕಚ್ಚಿಕೊಂಡು ಹೊಯ್ಮಾಲಿ ಹೊಯ್ಯಗೊಂಡಳು. ಈಗ ದೇವರೇಸಿ ಪ್ರಾಣಿಗಳ ಹಾಗೆ ಸಪ್ಪಳ ಮಾಡುತ್ತ ಖಂಡ ತಿನ್ನುವುದನ್ನು ನೋಡಿ ಬಸವರಜು ಮುಗುಳುನಕ್ಕ. ಒಳಗಿದ್ದ ಸುಂದರಿ ಈಶ್ಶೀ ಎಂದು ಕಿಸ್ಸಕ್ಕನೆ ನಕ್ಕಳು. ದೇವರೇಸಿ ಮಾತ್ರ ಇದಾವುದರ ಪರಿವೆಯಿಲ್ಲದೆ ತಿನ್ನುತ್ತಿದ್ದ.

ಮೈಯಲ್ಲಿ ಸೊಂಟದ ಧೋತ್ರ ಬಿಟ್ಟರೆ ಒಂದು ಚೂರು ಬಟ್ಟೆಯಿರಲಿಲ್ಲ. ಖಂಡ ಹೆಂಡ ಎರಡೂ ಸೇರಿ ಮೈಮೇಲೆ ಧಾರಾಕಾರ ಬೆವರು ಸುರಿಯುತ್ತಿತ್ತು. ಮೊದಲೇ ಕರ್ರಗೆ ಕಬ್ಬಿಣದಂತಿದ್ದ ಮೈ, ಬೆವರಿನಿಂದ ಇನ್ನಷ್ಟು ಹೊಳೆಯತೊಡಗಿತ್ತು. ಆ ಮೈಕಟ್ಟಿಗೆ ಅರವತ್ತು ವರ್ಷ ಬಹಳವಾಯ್ತು. ಎದೆ, ರಟ್ಟೆಯ ಮಾಂಡಖಂಡ ಗಟ್ಟಿಗೊಂಡು ಹುರಿಯಾಗಿದ್ದವು. ಹಿಂದೆ ಮಾರುದ್ದ ಜಡೆ, ಮುಂದೆ ಗಡ್ಡ, ಹೆಂಗಸಲ್ಲದ ಗಂಡಸಲ್ಲದ ಆ ಆಕೃತಿ ವಿಶೇಷ ನೋಡಿ ಬಸವರಾಜನಿಗೆ ಮೋಜೆನಿಸಿತು. ಸುಂದರಿಗೂ ಮುಂದೆ ಬಂದು ದೇವರೇಸಿಯಿಂದ ನೋಡಿಸಿಕೊಳ್ಳಬೇಕೆಂದಳು. ತಾನು ಹೇಳದ ಹೊರತು ಹೊರಗೆ ಬರಕೂಡದೆಂದು ಬಸವರಾಜು ಹೇಳಿದ್ದ, ಸುಮ್ಮನಿದ್ದಳು ಬಹುಶಃ ಖಾರ ಜಾಸ್ತಿಯಾಗಿರಬೇಕು ಪಲ್ಯಕ್ಕೆ. ದೇವರೇಸಿಯ ಮೂಗು ಸೋರಿ ಕಣ್ಣೀರೂ ಅದರೊಂದಿಗೆ ಬೆರೆತು, ಬೆವರುಗೈಯಿಂದಲೇ ಅದನ್ನೆಲ್ಲ ಒರೆಸಿಕೊಳ್ಳುತ್ತ ಉಂಡ. ಉಂಡ ಮೇಲೆ ಗುಡಿಸಲು ನಡುಗಿ, ಪಕ್ಕದ ಗುಡಿಸಲ ಮಕ್ಕಳು ಹೆದರಿ ಚೀರುವ ಹಾಗೆ ಡರ್‌ರ್‌ರ್ ಎಂದು ಢರಿಕೆ ತೇಗಿದ, ಸುಂದರಿಗೆ ಅಸಹ್ಯವಾಯ್ತು.

ಊಟವಾದ ಮೇಲೆ ಬಸವರಾಜು ಮತ್ತು ಸುಂದರಿ ಇಬ್ಬರೂ ಒಳಗೊಳಗೇ ನಗುತ್ತ ತಾಯಿಗೆ ಅಡ್ಡಬಿದ್ದರು. ತಾಯಿ ಅವರ ಹಣೆಗೆ ಬಮಡಾರ ಹಚ್ಚಲಿಲ್ಲ. ಹರಕೆ ನುಡಿಯಲಿಲ್ಲ. ತೇಲುಗಣ್ಣು ಮಾಡಿಕೊಂಡು ‘ತಾಯೀ’ ಎನ್ನುತ್ತ ಎದ್ದಳು. ತೂಕ ತಪ್ಪಿತು. ಬಸವರಾಜು ಹೋಗಿ ಹಿಡಿದುಕೊಂಡು ಅವಳ ಗುಡಿಸಲು ತನಕ ಹೋಗಿ ಬಿಟ್ಟುಬಂದ.

ಆ ದಿನ ರಾತ್ರಿ ದೇವರೇಸಿಗೆ ಯಾರೋ ನೆತ್ತಿಯ ಮೇಲೆ ಕೊಡ್ಲಿಯಿಂದ ಏಟು ಹಾಕಿದಂತೆ ಕನಸಾಯಿತು. ಗಡಬಡಿಸಿ ಎದ್ದು ಕುತ. ಬಿಕ್ಕಲಾಗಲಿಲ್ಲ. ಕನಸಿನ ಅರ್ಥವೂ ತಿಳಿಯಲಿಲ್ಲ. ಆದರೆ ಮಾರನೇ ದಿನದಿಂದ ತಾಯಿಯ ಕೃಪಾದೃಷ್ಟಿ ಬಸವರಾಜೂನ ಗುಡಿಸಲ ಕಡೆ ಬೀಳತೊಡಗಿತು. ಬಸವರಾಜು ನಿರಾಸೆಗೊಳಿಸಲಿಲ್ಲ.

 ಬಿ.ವಿ. ಕಾರಂತರಿಂದ ನಾನು ನಿರೀಕ್ಷಿಸುವುದು

ಬಿ.ವಿ. ಕಾರಂತರನ್ನು ಪ್ರತಿಭೆಯಲ್ಲಿ ಮೀರಿಸುವ  ಇನ್ನೊಬ್ಬ ನಾಟಕ ನಿರ್ದೇಶಕ ಭಾರತದಲ್ಲಿ ಇಲ್ಲ ಎಂದು ತಿಳಿಯುವ ಹಲವು ಸ್ನೇಹಿತರು ನನಗಿದ್ದಾರೆ. ಅಂಥವರಲ್ಲಿ ಒಬ್ಬರಾದ ಹಿಂದೀ ಲೇಖಕ ನಿರ್ಮಲ ವರ್ಮರು ಕಾರಂತರನ್ನು ಹೀಗೆ ಕೊಂಡಾಡಿದಾಗ ಕಾರಂತರು ಭೂಪಾಲ್ನಲ್ಲಿ ಇದ್ದರು. ಅವರ ಹಲವು ಪ್ರಯೋಗಗಳಲ್ಲಿ ಶೇಕ್ಸ್ ಪಿಯರ್ನ ಮ್ಯಾಕ್ಬೆತ್ನ್ನು ಭಾರತೀಯಗೊಳಿಸಿದ ಪ್ರಯೋಗ ಆ ಹೊತ್ತಿನಲ್ಲಿ ತುಂಬಾ ಹೆಸರು ಮಾಡಿತ್ತು. ಹೆಚ್ಚು ನಾಟಕಗಳನ್ನು ನೋಡದ ನಾನು ಈ ಪ್ರಯೋಗವನ್ನು ನೋಡಿಲ್ಲವೆಂದು ವಿಷಾದದಿಂದ ಹೇಳುತ್ತೇನೆ. ಆ ಕಾರಣಕ್ಕಾಗಿಯೇ ನಿರ್ಮಲ ವರ್ಮರ ಹೇಳಿಕೆಯನ್ನು ಉದ್ಧರಿಸುತ್ತಿದ್ದೇನೆ. ಅದೇ ನಿರ್ಮಲ ವರ್ಮರು ಇನ್ನೊಂದು ಸಂದರ್ಭದಲ್ಲಿ ಕಾರಂತರ ಬಗ್ಗೆ ದುಃಖದಿಂದ ಮಾತನಾಡಿದ್ದರು. ಎಲ್ಲರಿಗೂ ಫ್ಯಾಷನ್ ಆದ ಪ್ರಗತಿಶೀಲತೆಯ ದೃಷ್ಟಿಯಿಂದ ಕಾರಂತರು ಭೂಪಾಲ್ನಲ್ಲಿ ಹಲವು ದ್ವಿತೀಯ ದರ್ಜೆಯ ನಾಟಕಗಳನ್ನು ಆಡಿಸಿದ್ದು ಉಂಟಂತೆ. ಹೀಗೆ ಗೆಳಯರು ಕಾರಂತರನ್ನು ಟೀಕಿಸುವಾಗ ಕಾರಂತರದ್ದೇ ಆದ ಒಂದು ದರ್ಶನ ಇಲ್ಲ, ಅವರು ತಮ್ಮ ಪಾಲಿಗೆ ಬಂದ ಏನನ್ನಾದರೂ ಒಪ್ಪಿಕೊಂಡು ರಂಗದ ಮೇಲೆ ಸೊಗಸಾಗಿ ಪ್ರದರ್ಶಿಸಿ ಬಿಡುತ್ತಾರೆ ಎಂಬ ಭಾವನೆ ಇರುತ್ತಿತ್ತು. ಮೈಸೂರಿನಲ್ಲಿ ಜರ್ಮನ್ ನಿರ್ದೇಶಕನೊಬ್ಬನನ್ನು ಕರೆಯಿಸಿಕೊಂಡು ಅವರಿಂದ ಜರ್ಮನ್ ದೇಶದಲ್ಲಿ ಹಳಸಿಹೋದ ಒಂದು ಸಮಾಜವಾದೀ ಕೃತಿಯನ್ನು ರಂಗದ ಮೇಲೆ ತಂದದ್ದನ್ನು ಕಂಡು ನನಗೂ ಅದೇ ಬಗೆಯ ಕಿರಿಕಿರಿಯಾದದ್ದೂ ಇದೆ. ಕಾರಂತರಿಗೆ ಸಾಹಿತ್ಯ ಕೃತಿಗಳನ್ನುಆಯ್ದುಕೊಳ್ಳುವಾಗ ವಿವೇಚನಾ ಶಕ್ತಿಯೇ ಇಲ್ಲವೇನೋ ಎನ್ನುವ ಅನುಮಾನ ಬಂದದ್ದೂ ಇದೆ. ಆದರೆ ಈ ಬಗೆಯ ವಿಮರ್ಶಾತ್ಮಕ ಮಾತುಗಳನ್ನಾಡುವುದೂ ಅನನ್ಯ ರಂಗ ಪ್ರತಿಭೆಯ ಕಾರಂತರೊಬ್ಬರ ಬಗ್ಗೆ ಮಾತ್ರ ಸಾಧ್ಯ.

ಹೀಗೆ ಅನ್ನಿಸಲು ಕಾರಣವಿದೆ. ರಂಗದ ಒಟ್ಟೂ ಭಾಷೆಯನ್ನು ಕಾರಂತರಷ್ಟು ಸಹಜವಾಗಿ ಬಲ್ಲವರು ನಮ್ಮಲ್ಲಿ ಅತಿ ವಿರಳವಾದ್ದರಿಂದ ಇಷ್ಟು ಅದ್ಭುತವಾದ ಪ್ರತಿಭೆಗೆ ಸರಿಸಮಾನವಾದ ಜೀವನ ದರ್ಶನದ ಹುಡುಕಾಟವನ್ನು ಕಾರಂತರಲ್ಲಿ ನಾವು ಅಪೇಕ್ಷಿಸುವುದು ಸಹಜವಾದುದು.
ಉದಾಹರಣೆಗೆ ಕಾರಂತರ ಅತ್ಯಂತ ಯಶಸ್ವೀ ಪ್ರಯೋಗಗಳಲ್ಲಿ ಒಂದಾದ ಜಡಭರತದ ನಾಟಕ ‘ಸತ್ತವರ ನೆರಳು’ ನೆನಪಾಗುತ್ತದೆ. ಈ ನಾಟಕದಲ್ಲಿ ಬ್ರಾಹ್ಮಣ್ಯದ ಅವನತಿಯ ಬಗ್ಗೆ ಆಳವಾದ ವಿಷಾದ ಇದೆ ಎಂದು ನಾನು ತಿಳಿದಿದ್ದೇನೆ. ಆದರೆ ಇಡೀ ನಾಟಕ ಬ್ರಾಹ್ಮಣ್ಯದ ಲೇವಡಿ ಆಗುತ್ತದೆ. ಅದಕ್ಕೆ ಆ ಕಾಲದ ಅಪೇಕ್ಷೆಗಳೂ ಕಾರಣವೆನ್ನಬಹುದು. ಬ್ರಾಹ್ಮಣ್ಯದ ಲಾಂಚನ ತೊಟ್ಟವರೆಲ್ಲರೂ ರಂಗದ ಮೇಲೆ ಕಾಣಿಸಿಕೊಂಡದ್ದೇ ಹಾಸ್ಯಾಸ್ಪದ ವ್ಯಕ್ತಿಗಳೆಂದು ತೋರುವ ವಾತಾವರಣದಲ್ಲಿ ಕಾರಂತರು ಬಹಳ ಸಲೀಸಾಗಿ ಅಂಥಾ ಅಪೇಕ್ಷೆಯನ್ನು ತಮ್ಮ ಪ್ರದರ್ಶನದಲ್ಲಿ ಬೆಳೆಸಿಬಿಟ್ಟಿದ್ದಾರೆ ಎನ್ನಬಹುದು. ಪುರಂದರದಾಸರ ಎಲ್ಲ ಕೀರ್ತನೆಗಳೂ ಹಾಗೆಯೇ ಅದ್ಭುತವಾಗಿದೆ ಎನಿಸಿದರೂ ಭಕ್ತಿಯ ಪರವಶತೆಯ ಯಾವ ಲಕ್ಷಣವೂ ಅವುಗಳಲ್ಲಿ ಕಾಣಸಿಗುವುದಿಲ್ಲ. ‘ಸಂಸ್ಕಾರ’ ಸಿನಿಮಾದಿಂದ ಪ್ರಾರಂಭವಾದ ಈ ಬ್ರಾಹ್ಮಣ ಲೇವಡಿ ತೀರಾ ಸಲೀಸಾದ ವಿನೋದದ ಕಲಾ ಮಾರ್ಗವಾದದ್ದೂ ಇದಕ್ಕೆ ಕಾರಣವಿರಬಹುದು.

ಕಾರಂತರ ಬಗ್ಗೆ ಹೀಗೆ ನಾನು ಟೀಕಿಸುವಾಗ ನಮ್ಮೆಲ್ಲರನ್ನೂ ನಾನು ಒಳಪಡಿಸಿಕೊಂಡು ಮಾತನಾಡುತ್ತಿದ್ದೇನೆ. ನಮ್ಮ ಹಲವು ಕೃತಿಕಾರರಲ್ಲಿ ಮತ್ತು ಕಲಾವಿದರಲ್ಲಿ ಪ್ರಗತಿಶೀಲತೆ ಮತ್ತು ತಾತ್ವಿಕ ಬಂಡಾಯ ಆಳವಾದ ಮಾನಸಿಕ ತೊಳಲಾಟದಿಂದಲೂ ಸಂಕಟದಿಂದಲೂ ಉದ್ಭವಿಸಿ ಬಂದುದಲ್ಲ ಎಂಬ ಅನುಮಾನ ಈ ದಿನಗಳಲ್ಲಿ ನಮ್ಮಲ್ಲಿ ಹಲವರನ್ನು ಕಾಡುತ್ತಿದೆ. ಕಾಲಕ್ಕೆ ಸಲ್ಲುವುದಕ್ಕಾಗಿ ಎಲ್ಲೂ ಈ ಬಗೆಯ ಧೋರಣೆಯನ್ನು ಒಪ್ಪಿಕೊಂಡರು. ಕಾರಂತರು ದೊಡ್ಡ ಪ್ರತಿಭಾಶಾಲಿಗಳಾದ್ದರಿಂದ ಇದನ್ನು ಅತ್ಯಂತ ಆಕರ್ಷಕವಾಗಿ ಮಾಡಿದರು. ಆದರೆ ಯಾರ ಜೀವನವೂ ಇಂಥಾ ಕೃತಿಗಳಿಂದ ತಲ್ಲಣಗೊಂಡೀತೆಂದು ನನಗನ್ನಿಸುವುದಿಲ್ಲ.

ಕಾರಂತರ ಪ್ರಯೋಗಗಳು ಇಂಥಾ ಟೀಕೆಗೆ ಮಾತ್ರ ಸೀಮಿತವಾದುದ್ದಲ್ಲ ಎಂಬುದನ್ನು ಮಾತ್ರ ಕೂಡಾ ಹೇಳಲೇಬೇಕು. ಈಚಿನ ಅವರ ‘ಗೋಕುಲ ನಿರ್ಗಮನ’ ಮಾತ್ರವಲ್ಲ ಅವರ ಕಾರ್ನಾಡ್ ನಾಟಕ ಪ್ರಯೋಗಗಳು ಈ ಬಗೆಯ ಟೀಕೆಯಿಂದ ದೂರ ನಿಲ್ಲುತ್ತವೆ. ಇಂಥಾ ಕೃತಿಗಳಲ್ಲಿ ಮತ್ತು ಮಕ್ಕಳಿಗಾಗಿ ಅವರು ಆಡುವ ನಾಟಕಗಳಲ್ಲಿ ಅವರು ತಮ್ಮನ್ನು ತಾವು ಮೀರಿ ಹೋಗುತ್ತಾರೆ.

ಎಲ್ಲ ನಾಟಕದ ನಿರ್ದೇಶಕರಲ್ಲೂ ಸಭಿಕರ ತತ್ಕ್ಷಣದ ಮೆಚ್ಚುಗೆಗಳಿಸುವ ಅಪೇಕ್ಷೆ ಸಹಜವಾಗಿ ಇರುತ್ತದೆ. ಆದ್ದರಿಂದ ಕಣ್ಣಿಗೂ ಕಿವಿಗೂ ಅಬ್ಬರವಾಗಿ ಪ್ರಿಯವಾಗುವಂತೆ ನಾಟಕಗಳನ್ನು ಪ್ರದರ್ಶಿಸುವುದೇ ನಮ್ಮಲ್ಲಿ ಹೆಚ್ಚು. ಈ ದೆಸೆಯಲ್ಲಿ ಕಾರಂತರಿಂದ ಅಲ್ಪಶಕ್ತರೂ ಕಲಿತುಕೊಂಡ ಚಟವೂ ಇದೆ. ಒಂದು ಪಿಸುಮಾತಿಗೂ ಪ್ರಪಂಚದ ಅತ್ಯುತ್ತಮ ನಾಟಕಗಳಲ್ಲಿ ಜಾಗವಿದೆ. ನಮ್ಮಲ್ಲಿ ಅಂಥಾ ನಾಟಕಗಳು ಕಡಿಮೆ ಎನ್ನಬಹುದು. ಖಂಡಿತವಾಗಿ ನಮ್ಮ ಅತ್ಯುತ್ತಮ ಕಾದಂಬರಿಗಳೂ, ಕವನಗಳೂ, ಕಥೆಗಳೂ, ಕನ್ನಡ ನಾಟಕಗಳಿಗಿಂತ ಈ ಸೂಕ್ಷ್ಮತೆಯ ವಿಷಯಕ್ಕೆ ಬಂದಾಗ ಗುಣಮಟ್ಟದಲ್ಲಿ ಹೆಚ್ಚಿನವು. ನಾಟಕದಲ್ಲಿ ಇದಕ್ಕೆ ಕೆಲವೇ ಕೆಲವು ವಿನಾಯಿತಿಗಳಿವೆ ಎನ್ನಬಹುದು. ಆದ್ದರಿಂದಲೇ ಕಾರಂತರಂಥಾ ಪ್ರತಿಭಾವಂತರು ಪ್ರದರ್ಶನದ ರಂಜಕತೆಯಿಂದ ಕೃತಿಗಳ ದೌರ್ಬಲ್ಯವನ್ನು ಮುಚ್ಚಬೇಕಾಗತುತದೆ. ಜರ್ಮನಿಯ ನಾಟಕಕಾರನೊಬ್ಬ ತನ್ನ ಕೃತಿಯಲ್ಲಿ ಒಂದು ಇಡೀ ಊರನ್ನೇ ಸುಟ್ಟು ಪ್ರೇಕ್ಷಕರಿಗೆ ತಲ್ಲಣ ಉಂಟು ಮಾಡಿದರೆ, ಶೇಕ್ಸ್ ಪಿಯರ್ ತನ್ನ ಒಥೆಲೋ ನಾಟಕದಲ್ಲಿ ಕೇವಲ ಒಂದು ಕರವಸ್ತ್ರವನ್ನು ಕೆಳಗೆ ಬೀಳಿಸಿ ಜೀವ ಅಲ್ಲಾಡುವಂತೆ ಮಾಡುತ್ತಾನೆ ಎನ್ನುತ್ತಾರೆ. ಇದನ್ನೇ ಕಲೆಯಲ್ಲಿನ ಸೂಕ್ಷ್ಮತೆ ಎನ್ನುವುದು. ತಾಳ ತಮಟೆ ಕುಣಿತಗಳಿಲ್ಲದೆ ನಾಟಕವಾಗುವುದಿಲ್ಲವೆಂಬ ಭ್ರಮೆಯಿಂದ ಕಾರಂತರಂಥವರ ಪ್ರತಿಭೆ ನಮ್ಮನ್ನು ಬಿಡುಗಡೆ ಮಾಡಬೇಕಾಗಿದೆ.

ಈವರೆಗೆ ನಾನು ಕಾರಂತರನ್ನು ಕುರಿತು ಮಾತನಾಡುತ್ತಿರುವ ರೀತಿ ನಮ್ಮ ನಡುವಿನ ಅತ್ಯಂತ ಶ್ರೇಷ್ಠ ಕಲಾವಿದರೆಂದು ಅವರನ್ನು ತಿಳಿದು ನೇರವಾಗಿ ಹೇಳದಿದ್ದರೆ ನನ್ನ ಟೀಕೆ ಸಣ್ಣತನಕ್ಕೂ, ಅಪಾರ್ಥಕ್ಕೂ ಎಡೆಮಾಡಬಹುದೆಂಬ ಭಯ ನನಗಿದೆ. ಅವರ ಬಗ್ಗೆ ಬರೆಯುವ ಹಲವರು ಕಾರಂತರ ಹಲವು ಮುಖಗಳ ಪ್ರತಿಭೆಯನ್ನು ಕೊಂಡಾಡಿರುತ್ತಾರೆ ಎಂದು ನನಗೆ ಗೊತ್ತು. ಕಣ್ಣಿನ ಜೊತೆಗೆ ಕಿವಿ ಕೆಲಸ ಮಾಡಿದಾಗ ನಾಟಕದ ಶಬ್ದ ಶರೀರ ಉತ್ಪನ್ನವಾಗುತ್ತದೆ. ಈ ವಿಷಯವಾಗಿ ಕಾರಂತರಿಗಿಂತ ದೊಡ್ಡ ಜೀನಿಯಸ್ಸ್ ನ್ನು ನಾನು ನೋಡಿಲ್ಲ. ಹಾಗೆಯೇ ಒಂದನ್ನು ಇನ್ನೊಂದರ ಜೊತೆ ಸಂಬಂಧಪಡಿಸಿ ನೋಡುವ ಶಕ್ತಿ ಅತ್ಯುತ್ತಮ ಪ್ರತಿಭೆಯ ಲಕ್ಷಣ ಎನ್ನುವುದಾದರೆ, ಕಾರಂತರು ತಮ್ಮ ನೆನಪುಗಳನ್ನು ಬಳಸಿಕೊಳ್ಳುವ ಕ್ರಮ ಅದ್ಭುತವಾದ್ದು. ಅವರು ಮಾಡಿದ್ದು ಪೂರ್ವಭಾವಿಯಾಗಿ ಇದ್ದದ್ದಲ್ಲ. ಅದು ಅಲ್ಲೇ ರಂಗದ ಮೇಲೆಯೇ ಹುಟ್ಟಿಕೊಳ್ಳುವುದು. ಕಾರಂತರಿಗೂ ಕೂಡಾ ಅದು ಆ ಕ್ಷಣದಲ್ಲಿ ಅವತರಿಸಿತ್ತು.

ಪೂರ್ವ ಸಿದ್ಧತೆ ಇಲ್ಲದಂತೆ ಅನುಭವಕ್ಕೆ ಎದುರಾಗುವ ಈ ಶಕ್ತಿ ಎಲ್ಲಾ ಕಲೆಗಳ ಜೀವನದಲ್ಲಿ ಇರುವ ಗುಣ. ಅದು ಕಾರಂತರಲ್ಲಿ ಯಥೇಚ್ಛವಾಗಿದೆ. ಅಂದರೆ ಅತ್ಯುತ್ತಮ ಕಲಾವಿದನ ಪಾಡು ಅವರದ್ದಾಗಿದೆ. ಆದ್ದರಿಂದರಲೇ ಅವರು ಕೆಲವೊಮ್ಮೆ ತಾನು ಇನ್ನು ಮುಂದೆ ಏನನ್ನೂ ಮಾಡಲಾರೆನೆಂಬ ಸ್ಥಿತಿಯನ್ನು ತಲುಪುತ್ತಲೇ ಇರುತ್ತಾರೆ. ಎಲ್ಲಾ ದೊಡ್ಡ ಕಲಾವಿದರೂ ತಮ್ಮ ಅತ್ಯುತ್ತಮ ಕೃತಿರಚನೆಯ ನೆನಪಿನಿಂದ ಪೀಡಿತರಾಗಿರುತ್ತಾರೆ. ಹೀಗೆ ಪೀಡಿತರಾದವರೂ ಇನ್ನೊಂದು ಕೃತಿ ತಮಗೆ ಸಾಧ್ಯವಾಯಿತೆಂದೂ ಅಚ್ಚರಿಪಡುತ್ತಾರೆ. ಅಥವಾ ತನಗೆ ದೊರೆತ ಗೌರವ ಅನುಭವ ನೆರಳಿನಲ್ಲಿ ತಮಗೆ ಸಲೀಸಾದ್ದನ್ನು ಮಾಡುತ್ತಾ ನಿಂತುಬಿಡುತ್ತಾರೆ. ಕಾರಂಭತರು ಸಲೀಸಾದ್ದನ್ನು ಆಗಾಗ ಮಾಡಿದರೂ ನಿಜಕ್ಕೂ ಅವರು ತಮ್ಮಲ್ಲಿ ಅ-ದೃಷ್ಟವಾಗಿ ಇರುವುದರಿಂದ ಸದಾ ಬಾಧಿತರಾದವರು. ಆದ್ದರಿಂದಲೇ ಅವರನ್ನು ಹೀಗೆ ಚುಚ್ಚಿ ಮಾತನಾಡುವುದು ಸಾಧ್ಯ. ಅವರು ಎಷ್ಟು ನಮ್ಮ ಕಾಲದವರೆಂದರೆ, ಹಾಗೆಯೇ ಈ ಕಾಲದವರಾಗಿದ್ದೂ ಎಷ್ಟು ಪೂರ್ವಸ್ಮೃತಿಗಳನ್ನು, ಜನಪದ ಅಭಿವ್ಯಕ್ತಿ ಕ್ರಮಗಳನ್ನೂ ನೆನಪಾಗಿ ಪಡೆದವರೆಂದರೆ, ನಮ್ಮ ಕಾಲದ ಇತಿಮಿತಿಗಳನ್ನು ಅವರು ಮೀರುವುದನ್ನು ನಾವು ಸಹದವಾಗಿ ನಿರೀಕ್ಷಿಸುತ್ತೇವೆ.

 ಶಿಲಾ ತಪಸ್ವಿ

ವ್ಯೋಮ ಮಂಡಿತ ಸಹ್ಯಶೈಲಾಗ್ರದಡವಿಯಲಿ
ಸಂಚರಿಸುತಿರೆ, ಸಂಜೆ ಪಶ್ಚಿಮ ದಿಗಂತದಲಿ
ಕೆನ್ನಗೆಯ ಬೀರಿತ್ತು. ರವಿ ಮುಳುಗುತಿರ್ದಂ;
ಅಸ್ತಗಿರಿ ಚೂಡಸ್ಥ ತಪ್ತ ಬಿಂಬಾರ್ಧಂ
ರಕ್ತಸಿಕ್ತಾಂಬರದ ಹೇಮ ಜೀಮೂತದಲಿ
ಮಿಂಚಿನಂಚನು ನೆಯ್ದು, ರಕ್ತಕಾಂತಿಯ ಹೊಯ್ದು,
ಶೋಭಿಸಿತು. ಸಂಧ್ಯೆಯಾ ಶೋಣಿತ ಸ್ರೋತದಲಿ
ಮಿಂದ ಮುಗಿಲೆಸೆದತ್ತು. ಪೂರ್ವಯುಗದಲಿ ಪಿಂತೆ
ರಕ್ಕಸನ ಹೀರ್ದ ನರಹರಿಯ ನಾಲಗೆಯಂತೆ!
ಬೈಗುಗೆಂಪನು ಹೊದೆದ ಬಿತ್ತರದರಣ್ಯಂ
ಪರ್ವತಧ್ಯಾನದಲಿ ಮುಳುಗಿತ್ತು. ಧನ್ಯಂ
ನಾನೆಂದು ತೇಲುತಿರೆ ಸೌಂದರ್ಯಪೂರದಲಿ,
ಯಾವುದೋ ಭವ್ಯತರ ಸಾನ್ನಿಧ್ಯಭಾರದಲಿ,
ಕೇಳಿಸಿತು ದನಿಯೊಂದು; ಕಾಣಿಸಿತು ದೂರದಲಿ
ಶಿಲೆಯೊಂದು ಮೊರಡಾದ ಮನುಜನಾಕಾರದಲಿ.
ಆ ಶಿಲಾ ಶೈಲತಪಸಿಯು ಕರೆಯುತೆನ್ನಂ
ನುಡಿದುದಿಂತೆಂದು: ಓ ಕಬ್ಬಿಗನೆ, ತನ್ನಂ
ಕಲ್ಲು ಕರೆಯಿತು ಎಂದು ಬೆಚ್ಚದಿರು. ಮುನ್ನಂ,
ಶತಶತ ಸಹಸ್ರ ಶತಮಾನಗಳ ಮುನ್ನಂ
ನಾವಿರ್ವರೊಂದೆ ಬಸಿರಿಂ ಬಂದು ಲೀಲೆಯಲಿ
ಮುಳುಗಿದೆವು ಸಂಸಾರ ಮಾಯಾಗ್ನಿ ಜ್ವಾಲೆಯಲಿ.
ನೀನು ಮರೆತಿರಬಹುದು, ಚೇತನದ ಸುಖದೊಳಿಹೆ;
ನಾನು ಮರೆತಿಲ್ಲದನು, ಜಡತನದ ಸೆರೆಯೊಳಿಹೆ!
ಆ ಕಲ್ಲುಕಿತ್ತಡಿಯ ಹೊರೆಗಾಗಿ ನಡೆಯುತ್ತೆ
ನಿಂತೆನಾಶ್ಚರ್ಯದಲಿ. ಮೂರುತಿಯು ನುಡಿಯುತ್ತೆ
ನುಡಿಯುತ್ತೆ ಕಣ್ಣೀರು ಕರೆವುದನು ಕಂಡೆ:
ಹರಳುಗಂಬನಿಯುರುಳಿಸಳುತಿತ್ತು ಬಂಡೆ!
ನೋವೆಲ್ಲ ಹೊನಲು ಹರಿವಂದದಲಿ ವಾಣಿ
ತುಂಬಿತಾಕಾಶವನು; ಗಿರಿವನಶ್ರೇಣಿ
ಮರುಗಿದುದು ಮೌನದಲಿ ಅನುಕಂಪವನು ತೋರಿ.
ಅಸ್ತಮಿಪ ಬೆಳಕಿನಲಿ ದೀರ್ಘಛಾಯೆಯ ಬೀರಿ
ಬಳಿಯ ಮರಗಳು ನಿಂತುವಾಲೈಸಿ. ನಿಂತು
ಕೇಳುತಿರಲಾ ಕಲ್ಲು ಮುಂಬರಿಯಿತಿಂತು:
ಕಾಲವಲ್ಲಿರಲಿಲ್ಲಿ; ದೇಶವಲ್ಲಿರಲಿಲ್ಲಿ;
ಗ್ರಹಕೋಟಿ ಶಶಿಸೂರ್ಯ ತಾರಕೆಗಳಿರಲಿಲ್ಲ;
ಬೆಳಕು ಕತ್ತಲೆ ಎಂಬ ಭೇದವಿನಿತಿರಲಿಲ್ಲ.
ಮಮಕಾರ ಶೂನ್ಯದಲಿ ಮುಳುಗಿದ್ದುವೆಲ್ಲ!
ಮೂಡಿದುದು ಮೊದಲು ಮಮಕಾರವೆಂಬುವ ಮಾಯೆ;
ಬೆಂಕೊಂಡು ತೋರಿದುದು ಸೃಷ್ಟಿ ಎಂಬುವ ಛಾಯೆ.
ಕಾಲದೇಶದ ಕಡಲ ಕಡೆಹದಲಿ ಸಿಕ್ಕಿ
ಆದಿಮ ಲಯಾಗ್ನಿ ಹೊರಹೊಮ್ಮಿದುದು. ಉಕ್ಕಿ
ಸುತ್ತಿದುದು; ಚಿಮ್ಮಿದುದು ದೆಸೆದೆಸೆದೆಸೆಗೆ ಹಬ್ಬಿ
ಘೂರ್ಣಿಸುತೆ ವಿಶ್ವದ ಅನಂತತೆಯನೇ ತಬ್ಬಿ.
ಓ ಕವಿಯೆ, ಆ ಭೀಷ್ಮ ಲಯಶಿಖಿ ಪ್ರವಾಹದಲಿ,
ನಿದ್ದೆಯಿಂದೆದ್ದಾ ಪರಬ್ರಹ್ಮದೇಹದಲಿ,
ಆ ಮಹಾ ಉಜ್ವಲ ಪ್ರೇಮ ಘನವಹ್ನಿಯಲಿ,
ಸದ್ಯಃಪ್ರಫುಲ್ಲ ಕಲ್ಪಾದಿ ಪ್ರತಿಭೆಯಲ್ಲಿ
ಕನಸಿನಲಿ ಸಂಚರಿಪ ಚಿತ್ರಸಂಕುಲದಂತೆ,
ಮಂಥನದಿ ಮೂಡಿಬಹ ಜಲಬುದ್ಬುದಗಳಂತೆ,
ಕವಿಮನದಿ ಮಿಂಚಿಬಹ ಭಾವಮಂಜರಿಯಂತೆ,
ಮರುಮರೀಚಿಕೆಯಲ್ಲಿ ನರ್ತಿಸುವಲೆಗಳಂತೆ,
ವೈಣಿಕನ ಸ್ವರ ಸ್ವರ್ಗ ಸೋಪಾನ ಶ್ರೀಯಂತೆ
ಆ ವಿಶ್ವಕಾವ್ಯದಸ್ಪಷ್ಟ ಪೂರ್ಣತೆಯಲ್ಲಿ,
ಸ್ಪಷ್ಟವ್ಯಕ್ತಿತ್ವದಾಕಾಂಕ್ಷೆಯಿಂ, ನಿಂದಲ್ಲಿ
ನಿಲದೆ ಸಂಚರಿಸಿದೆವು ಆ ಅಗ್ನಿಜಲದಲ್ಲಿ:
ನೋಡಿನ್ನುಮಿರ್ಪುದಾ ಕಲೆ ನನ್ನ ಎದೆಯಲ್ಲಿ!
ಮೌನದಲಿ ನಿಂತಾ ಮಹಾಚಲಶ್ರೇಣಿ
ಆಲಿಸಿತು ತನಗದು ಪ್ರತಿನಿಧಿಯ ವಾಣಿ
ಎಂಬಂತೆ. ಭೀಮಗಿರಿ ಶಿಖರಗಳ ಕರಿನೆರಳು
ಹೊನಲಾಗಿ ಹರಿದುದು ಕಣಿವೆಯೊಳಗೆ. ಮುನ್ನಿರುಳು
ಮೆಲುಮೆಲನೆ ನಾಡನಾಲಿಂಗಿಸಿತು. ಸದ್ದು
ಕರಗುತಿದ್ದುದು ನಿದ್ದೆಗಡಲಿನಲಿ ಬಿದ್ದು.
ಭೂಗೋಲ ಭೀಮ ಛಾಯಾ ಸ್ತೂಪ ಚೂಡಂ
ಆಕಾಶದೇಶದಲಿ ಕರಿದೆರೆಯ ಬೀಡಂ
ತಿಮಿರರಾಣಿಗೆ ರಚಿಸಿದತ್ತು; ಪಟಶಾಲೆಯಲಿ
ತಾರೆಗಳ ಕೆತ್ತತೊಡಗಿತು ಮಾಲೆಮಾಲೆಯಲಿ!
ನೋಡೆಂದು ಶಿಲೆಯು ಬೆಸಗೊಳೆ ನೋಡಿ ಬೆಚ್ಚಿದನು;
ಕಲ್ಪಾದಿಯಗ್ನಿಯನು ಕಂಡು ಕಣ್ ಮುಚ್ಚಿದೆನು!
ಆ ಸನಾತನ ಶೈಲತಪಸಿಯೆದೆಯಾಳದಲಿ
ಯುಗಯುಗಗಳಿನ್ನುಮವಿತಿಹವಲ್ಲಿ. ನಾಳದಲಿ
ನಾಳದಲಿ ಕಲ್ಪಗಳು ಆತ್ಮಕಥೆ ಹೇಳುತಿವೆ;
ಹಿಂದುಮುಂದೊಂದರಿಯದಿಂದಿನೊಳೆ ಬಾಳುತಿವೆ
ಕಾಲದೇಶಾದಿ ಪರಿಣಾಮ ಕೋಟಿಗಳಲ್ಲಿ.
ಮರಳಿ ನುಡಿ ತೊಡಗಿತಿಂತಾ ಶಿಲೆಯ ಸೆರೆಯಲ್ಲಿ:
ಇಂತಿರಲು, ನೀರಿನಲಿ ತೇದ ಮಿಂಚಿನ ತೆರದಿ,
ಬಂಧನವ ಹರಿಯಲೆಳಸುವ ಕೇಸರಿಯ ತೆರದಿ,
ಹರಿದು ಭೋರಿಡುವ ಆ ಅಗ್ನಿಪ್ರವಾಹಂ
ದಿಕ್ಕುದಿಕ್ಕಿಗೆ ಸಿಡಿದೊಡೆದು, ದೇಶದೇಹಂ
ಗಹಭೂಮಿ ಶಶಿಸೂರ್ಯ ತಾರಾಖಚಿತಮಾಯ್ತು.
ನನಗೆ ಈ ಭೂಗರ್ಭವೇ ಸೆರೆಯ ಮನೆಯಾಯ್ತು!
ಕಲ್ಪಕಲ್ಪಗಳಿಂದ ನಾನಲ್ಲಿ ಸೆರೆಯಾಗಿ
ನರಳಿದೆನು ಕತ್ತಲಲಿ. ಜ್ಯೋತಿದರ್ಶನಕಾಗಿ
ಮೊರೆಯಿಟ್ಟು ಕೂಗುತಿರೆ, ಕಲ್ಲೆನಗೆ ಮೈಯಾಗಿ
ಕಡೆಗಿಲ್ಲಿ ನೆಲೆಸಿದೆನು. ಇರೆಯಿರೆ ಕ್ರಮವಾಗಿ
ನನ್ನ ಸೋದರರೆಲ್ಲ ಮರಗಿಡಗಳಂದದಲಿ
ಮೂಡಿದರು; ಉಸಿರೆಳೆದು ಬೆಳೆಬೆಳೆದು ಚಂದದಲಿ
ನಲಿದಾಡಿದರು; ಕೆಲರು ಸ್ವಪ್ನವನು ಸೀಳಿ
ತಿರುಗಾಡಿದರು ಪ್ರಾಣಿರೂಪವನು ತಾಳಿ;
ಮೆಲಮೆಲ್ಲನೆ ಕೆಲರು ನರರಾಕೃತಿಯ ತಳೆದು
ತಪ್ಪು ಹಾದಿಯೊಳೆನಿತೊ ಶತಮಾನಗಳ ಕಳೆದು
ನಾಗರಿಕರಾದರೈ ಬುದ್ಧಿಶಕ್ತಿಯ ತೋರಿ!
(ಹಾ! ದೂರವಿಹುದಿನ್ನುಮೆನಗೆ ನಡೆಯುವ ದಾರಿ!)
ಗಗನದಲಿ ಕಾಣುವಾ ತಾರೆಗಳಲೆಲ್ಲಿಯೂ
ತಿರುಗಿಹೆನು; ಆದರೇನವುಗಳಲಿ ಎಲ್ಲಿಯೂ
ಕ್ರಿಮಿಯೊಂದರಲ್ಲಿರುವ ಚೇತನದ ಕಣವಿಲ್ಲ;
ಸ್ವೇಚ್ಛೆಯೆಂಬುವುದಿಲ್ಲ; ಕಡೆಗೊಂದು ತೃಣವಿಲ್ಲ!
ಈ ಭೂಮಿಯೊಂದು ಕ್ರಿಮಿ ಕ್ಷಣಜೀವಿಯಾದರೂ
ತಾರೆಗಳ ಮೀರಿಹುದು: ಯುಗಜೀವಿಯಾದರೂ
ತನ್ನಿಚ್ಛೆ ಏನೆಂಬುದರಿಯದಿಹ ದಾಸ್ಯಂ
ಸಾವಿಗೆಣೆ. ನೇಸರ್ಗೆ ಕ್ರಿಮಿಗಿರಿದ ದಾಸ್ಯಂ!
ಎಲ್ಲ ಜಡತೆಯ ಬಯಕೆ ಚೈತನ್ಯಸಿದ್ಧಿಯೈ.
ಈ ರಹಸ್ಯವನರಿತ ಮಾನವನೆ ಬುದ್ಧನೈ! –
ಆ ಶಿಲಾತಪಸಿಯುಪದೇಶವನು ಕೇಳುತ್ತೆ
ನಿಷ್ಟಂದನಾದೆನಾವೇಶವನು ತಾಳುತ್ತೆ.
ಶಿಲೆಯೆ ಕವಿ; ಕವಿಯೆ ಶಿಲೆ; ಅದೆ ತತ್ವಬೋಧೆ!
ಕಲ್ಲೆನಗೆ ಗುರುವಾಯ್ತು; ನಾ ಶಿಷ್ಯನಾದೆ.
ಮೇಲೆ ನಭದಲಿ ತಾರೆ ಸಾಕ್ಷಿಕಾಂತಿಯ ಬೀರಿ
ಮಿಣುಕಿದುವು. ಕೆಳಗೆ ಕತ್ತಲು ಸಂಶಯವ ತೋರಿ
ಮುಸುಗಿತ್ತು. –

ಓ ಕಬ್ಬಿಗನೆ, ಸೋದರನೆ ಕೇಳು:
ನಾನು ಈ ಕಲ್ಲಿನಲ್ಲಿ ಸೆರೆಸಿಕ್ಕಿರಲು, ಹಾಳು
ಜಡತನಕೆ ಬೇಸತ್ತು ಜೀವವನು ಬಯಸುತ್ತೆ
ಮರುಗುತಿರೆ, ಶಿಲ್ಪಿಯೊರ್ವನು ಇಲ್ಲಿ ತಿರುಗುತ್ತೆ
ಬಂದು, ಮರುಗುತೆ ನನಗೆ, ಬಂಡೆಯನು ಕಡೆದು
ಬಿಡಿಸಿದನು. ನಾನು ಈ ರೂಪವನು ಪಡೆದು
ಕಲೆಯ ಸಾನ್ನಿಧ್ಯದಲಿ ಒಂದಿನಿತು ಕಣ್ದೆರೆದು,
ಪೂರ್ವಬಂಧದ ಶಿಲಾಕ್ಲೇಶವನು ನಸುತೊರೆದು
ಚೇತನದ ಛಾಯೆಯನು ಸವಿಯುತೊಡಗಿದೆನಂದು.
(ಕಲ್ಗೆ ಕಣ್ಣಿತ್ತ ಆ ಕಲೆಯೆನಗತುಲ ಬಂಧು!)
ಕಲೆಯ ಕಣ್ಣಿರದ ನರರಿಗೆ ನಾನು ಬರಿ ಕಲ್ಲು;
ಕವಿಯನುಳಿದಾರಿಗೂ ಕೇಳದೆನ್ನೀ ಸೊಲ್ಲು!
ನಾನು ರವಿಯುದಯವನು ನೋಡಿ ನಲಿಯಲು ಬಲ್ಲೆ:
ಬನದ ಬೆಟ್ಟದ ನೆತ್ತಿಯಲಿ ತಿಂಗಳು ನಿಲ್ಲೆ,
ಹುಣ್ಣಿಮೆಯ ತಿಳಿಬಾನು ಬೆಳ್ದಿಂಗಳನು ಚೆಲ್ಲೆ,
ಭಾವದಲೆಗಳು ನನ್ನ ರಕ್ತನಾಳಗಳಲ್ಲಿ
ಮೊರೆಯುವುವು ಸೌಂದರ್ಯದಾನಂದಭರದಲ್ಲಿ!
ನಿನ್ನಂತೆಯೇ ನಾನು ಕೋಗಿಲೆಯ ದನಿಗೇಳಿ
ಮುದವ ತಾಳಲು ಬಲ್ಲೆ; ಬೀಸಿಬರೆ ತೆಂಗಾಳಿ
ಮೈಯೊಡ್ಡಿ ಬೇಗೆಯನು ಪರಿಹರಿಸಿಕೊಳಬಲ್ಲೆ!
ಈ ವಿಶ್ವವೆಲ್ಲವನು ನಿನ್ನಂತೆ ನಿಂತಲ್ಲೆ
ಕಲ್ಪನೆಯ ತಕ್ಕೆಯಲೆ ತಬ್ಬಿ ಸಾಯಲು ಬಲ್ಲೆ!
ಆದರೂ ನನಗಿನ್ನೂ ನಿನ್ನರವು ಬಂದಿಲ್ಲ;
ಅದಕಾಗಿ ತಪವಗೈಯುತ್ತಿಹೆನು. ಒಂದಿಲ್ಲ
ಒಂದು ದಿನ ಮುಂದೆ ನಿನ್ನಂತೆ ತಿರುಗಾಡುವೆನು;
ಕವಿಯಾಗಿ ಕನ್ನಡದ ಕವನಗಳ ಮಾಡುವೆನು;
ಮಾಡಿ, ನಿನ್ನಂತೆಯೇ ಜನಗಳಿಗೆ ಹಾಡುವೆನು!
ಅದಕಾಗಿ, ಓ ಕವಿಯೆ, ನಿನ್ನ ನೆರವನು ಬೇಡಿ
ಕರೆದೆನಿಂದೀಯೆಡೆಗೆ; ನೀನಿಲ್ಲಿಗೈತಂದು
ನಿತ್ಯವೂ ನನಗಾಗಿ ನಿನ್ನ ರಚನೆಯ ಹಾಡಿ
ಕಲೆಯ ಸಾನ್ನಿಧ್ಯದಿಂದೆನಗೆ ನರತನ ಬಂದು,
ನಿನ್ನಂತೆಯೇ ನಾನು ಚೇತನದ ಮುಕ್ತಿಯಂ!
ಪಡೆದು ನಲಿವಂದದಲಿ ನೀಡೆನಗೆ ಶಕ್ತಿಯಂ!
ಓ ಕಬ್ಬಿಗನೆ, ನಿನ್ನೊಳಿಹ ಕಲೆಗೆ ಶಕ್ತಿಯಿದೆ.
ಜಡವ ಚೇತನಗೊಳಿಪ ದಿವ್ಯತರ ಮುಕ್ತಿಯಿದೆ.
ಮನುಜರಿಗೆ ಸೊಗಮೀವ ಕರ್ತವ್ಯವೊಂದೆ
ನಿನ್ನೆದೆಂದರಿಯದಿರು; ನಿನ್ನ ಕಲೆಯಿಂದೆ
ನೂರಾರು ಆತ್ಮಗಳು ಜಡತನದ ಬಲೆಯಿಂದೆ
ಬಿಡುಗಡೆಯ ಹೊಂದುವುವು; ಏಕೆನೆ ಕವನದಿಂದೆ
ಕಲ್ಗಳೂ ವಾಲ್ಮೀಕಿಯಾಗಿಹವು ಹಿಂದೆ!
ದನಿಯು ನಿಂತಿತು. ನಾನು ಕಲ್ಲುತವಸಿಯ ಮುಟ್ಟಿ
ಮುದ್ದಿಟ್ಟು ಮರಳಿದೆನು. ಕಾಲಡಿಯೊಳಿಹ ಮಟ್ಟಿ
ನೋಯುವುದೊ ಎಂದಳುಕಿ ಮಲ್ಲಮೆಲ್ಲನೆ ನಡೆದೆ.
ನಾಳೆ ಸಂಜೆಯೊಳಾನು ಕಲ್ಲುಗೆಳೆಯನ ಬಿಡದೆ
ಕಂಡು ಮಾತಾಡುವೆನು; ಕವನಗಳ ಹಾಡುವೆನು:
ಕಲ್ಲು ಕವಿಯಪ್ಪನ್ನೆವರಮಾನು ಹಾಡುವೆನು!
ಶಿಲೆಯು ಕಲೆಯಪ್ಪನ್ನೆವರಮಾನು ಹಾಡುವೆನು!

No comments:

Post a Comment